ಯುಚಿ - 
	 ಚೀನದ ಮಧ್ಯ ಷಾನ್‍ಸೀ ಪ್ರಾಂತ್ಯದ ಒಂದು ನಗರ, ಕೌಂಟಿ ಮಟ್ಟದ ಆಡಳಿತ ಕೇಂದ್ರ ಹಾಗೂ ಚಿನ್-ಚುಂಗ್‍ನ ವಿಶೇಷ ಪ್ರದೇಶದ ಆಡಳಿತ ಕೇಂದ್ರ. ಉತ್ತರ ಅಕ್ಷಾಂಶ 370 47' ಮತ್ತು ಪೂರ್ವರೇಖಾಂಶ 1120 42'ಗಳ ನಡುವಿರುವ ಈ ನಗರ ಅನತಿ ದೂರದಲ್ಲಿರುವ ತಾಯ್-ಯುವಾನಿನ ಉತ್ತರಕ್ಕಿದೆ. ಈ ನಗರ ಹಾನ್ ವಂಶದ ಆಳ್ವಿಕೆಯ ಕಾಲದಿಂದಲೂ (ಕ್ರಿ.ಪೂ. 206-220) ಅಧೀನ ಕೌಂಟಿಯಾಗಿ ಮುಂದುವರಿದಿತ್ತು. 448ರಲ್ಲಿ ಈಗಿನ ಯುಚಿ ನಗರ ನಿರ್ಮಿತವಾಯಿತು. ಇದರ ಪಶ್ಚಿಮಕ್ಕೆ ಸ್ವಲ್ಪ ದೂರದಲ್ಲಿಯೆ ಹಳೆಯ ನಗರವಿದೆ. ಹೋಪೇ ಪ್ರಾಂತ್ಯದಿಂದ ತೈಹಾಂಗ್-ಷಾನ್ ಬೆಟ್ಟ ಸಾಲುಗಳನ್ನು ಹಾದು ತಾಯ್-ಯುವಾನ್ ಕಣಿವೆ ಪ್ರದೇಶಕ್ಕೆ ಸಾಗುವ ಮಾರ್ಗಮಧ್ಯದ ಆಯಕಟ್ಟಿನ ಸ್ಥಳದಲ್ಲಿರುವ ಈ ನಗರ ಅಲ್ಲಿಯ ಸಾರಿಗೆ ಸಂಪರ್ಕದ ಪ್ರಧಾನ ನೆಲೆಯಾಗಿದೆ. ಹಿಂದೆ ಇದು ವ್ಯವಸಾಯೋತ್ಪನ್ನಗಳ ಸಾಂಪ್ರದಾಯಿಕ ಸಂಗ್ರಹಣಾ ಸ್ಥಳವಾಗಿದ್ದು, ಇಲ್ಲಿ ದವಸಧಾನ್ಯ, ಹಣ್ಣು, ಹತ್ತಿ ಹಾಗೂ ಜವಳಿಗೆ ಸಂಬಂಧಿಸಿದಂತೆ ವ್ಯಾಪಾರ ವ್ಯವಹಾರ ನಡೆಯುತ್ತಿತ್ತು. ಎರಡನೆಯ ಮಹಾಯುದ್ಧದ ಮೊದಲು ಸಣ್ಣ ಮಾರುಕಟ್ಟೆ ಕೇಂದ್ರವಾಗಿದ್ದ ಈ ನಗರ 3.22 ಕಿಮೀ ಸುತ್ತಳತೆಯ ಗೋಡೆಯಿಂದ ಕೂಡಿದ್ದು, ಕೇವಲ ಆರುಸಾವಿರ ಜನ ವಾಸಿಸುತ್ತಿದ್ದರು. ಮುಂದೆ ರೈಲು ಕೂಡು ನಿಲ್ದಾಣವಾಗಿದ್ದ ಈ ನಗರ ದಿನೇ ದಿನೇ ಪ್ರಾಮುಖ್ಯ ಗಳಿಸಿತು. ಉದ್ಯಮಗಳ ವಿಸ್ತರಣೆ ಹಾಗೂ ಸಂವಹನ ಕೇಂದ್ರ ಸ್ಥಾಪನೆಗಳಿಂದಾಗಿ 1950ರ ದಶಕದಲ್ಲಿ ಈ ನಗರದ ಜನಸಂಖ್ಯೆ ಬೆಳೆಯಿತು. 1970ರ ಮೊದಲ ವರ್ಷಗಳಲ್ಲಿ ಸೋವಿಯತ್ ಒಕ್ಕೂಟದ ಸಹಾಯದಿಂದ ಬೃಹತ್ಪ್ರಮಾಣದ ಹತ್ತಿ ಉತ್ಪಾದಕ ಉದ್ಯಮವೊಂದು ಇಲ್ಲಿ ಸ್ಥಾಪಿತವಾಯಿತು. ಆ ವೇಳೆಗೆ ಇಲ್ಲಿನ ಜನಸಂಖ್ಯೆ ಒಂದು ಲಕ್ಷವನ್ನೂ ಮೀರಿತ್ತು.
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ